ತುಕೋಜಿರಾವ್ ಹೋಳ್ಕರ್ 
 	ಭಾರತದ ಇತಿಹಾಸದಲ್ಲಿ ಈ ಹೆಸರಿನ ರಾಜರು ಮೂವರು ಇದ್ದಾರೆ. 18ನೆಯ ಶತಮಾನದ ಅಂತ್ಯದಲ್ಲಿ ಮರಾಠಾ ರಾಜ್ಯವಾದ ಇಂದೂರನ್ನಾಳುತ್ತಿದ್ದ ಹೋಳ್ಕರ್ ಸಂತತಿಯ ಅಹಲ್ಯಾ ಬಾಯಿಯ ಸೇನಾಧಿಪತಿಯಾಗಿದ್ದು ಆಕೆಯ ನಂತರ ಆಳ್ವಿಕೆ ನಡೆಸಿದವ (1795-1797) ಒಬ್ಬ. ಇನ್ನಿಬ್ಬರು 19ನೆಯ ಶತಮಾನದಲ್ಲಿ ಬ್ರಿಟಿಷರ ಆಶ್ರಿತರಾಗಿ ಆಳಿದವರು.

	ರಾಣಿ ಅಹಲ್ಯಾ ಬಾಯಿಯ ಸೇನಾಧಿಪತಿಯಾಗಿದ್ದ ತುಕೋಜಿರಾವ್ ಆಕೆಯ ದೂರದ ಸಂಬಂಧಿ. ಸಿಪಾಯಿಯಾಗಿ ಜೀವನವನ್ನಾರಂಬಿಸಿ ತನ್ನ ಸಾಮಥ್ರ್ಯದಿಂದ ಮೇಲೆ ಬಂದ. ಭಾರತದ ಗೊಂದಲಮಯ ಸನ್ನಿವೇಶದಲ್ಲಿ ರಾಜ್ಯದ ಸೂತ್ರವನ್ನು ವಹಿಸಿಕೊಂಡಿದ್ದ ಅಹಲ್ಯಾ ಬಾಯಿಯ ಆಳ್ವಿಕೆ ಒಂದು ಸಾಹಸವೇ ಆಗಿತ್ತು. ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ದೃಢವಾಗಿ ರಾಜ್ಯವಾಳಿದ ಅಹಲ್ಯಾ ಬಾಯಿಗೆ ನೆರವು ನೀಡಿದ ಪ್ರಮುಖ ವ್ಯಕ್ತಿ ತುಕೋಜಿರಾವ್, ಇವನು ರಾಣಿಯ ಕೊನೆಯವರೆಗೂ ನಿಷ್ಟನಾಗಿದ್ದು ಹಲವಾರು ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದ. ಇವನ ನೇತೃತ್ವದಲ್ಲಿ ಮರಾಠರು ಗುಜರಾತಿನಲ್ಲಿ ಇಂಗ್ಲೀಷರ ವಿರುದ್ಧವೂ ಕರ್ನಾಟಕದಲ್ಲಿ ಹೈದರ್ ಮತ್ತು ಟೀಪೂಗಳ ವಿರುದ್ಧವೂ ಯುದ್ಧವನ್ನು ನಡೆಸಿದರು. 1786-87ರಲ್ಲಿ ಹುಬ್ಬಳ್ಳಿಯೂ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಸ್ಥಳಗಳನ್ನು ಇವನು ವಶಪಡಿಸಿಕೊಂಡ. ಇವನ ಕಾಲದಲ್ಲಿ ಸಿಂಧ್ಯ ಮತ್ತು ಹೋಳ್ಕರ್ ಮನೆತನಗಳ ನಡುವೆ ವೈರ ಮುಂದುವರಿದಿತ್ತು. ಆದರೆ ಇವನ ಅಪ್ರತಿಮ ಧೈರ್ಯಸಾಹಸಗಳು ಹೋಳ್ಕರ್ ರಾಜ್ಯವನ್ನು ರಕ್ಷಿಸಿದವು. 1795ರ ಆಗಸ್ಟ್ 13ರಂದು ಅಹಲ್ಯಾ ಬಾಯಿ ತೀರಿಕೊಂಡಾಗ ತುಕೋಜಿರಾಯನೇ ದೊರೆಯಾದ. ಆದರೆ 1797ರ ಆಗಸ್ಟ್ 15ರಂದು ಇವನು ತೀರಿಕೊಂಡ. ಇವನ ಆಳ್ವಿಕೆಯ ಅತ್ಯಲ್ಪ ಅವಧಿಯಲ್ಲೂ ಈತ ಒಳ್ಳೆಯ ಹೆಸರು ಗಳಿಸಿದ. ಇವನ ನಿಧನಾನಂತರ ಅಲ್ಲಿ ಅವ್ಯವಸ್ಥೆ ತಲೆದೋರಿತು.

	 ಇನ್ನೊಬ್ಬ ತುಕೋಜಿರಾವ್ ಹೋಳ್ಕರ್ 1843ರಿಂದ 1846ರ ವರೆಗೆ ಆಳಿದ. ಅವನು ದಕ್ಷ ಆಡಳಿತಗಾರನೆಂದು ಪ್ರಸಿದ್ಧವಾಗಿದ್ದ. 3ನೆಯ ತುಕೋಜಿರಾವ್ ಹೋಳ್ಕರ್ 1903ರಿಂದ 1926 ರ ವರೆಗೆ ರಾಜ್ಯವಾಳಿದ. ಇವರಿಬ್ಬರೂ ಬ್ರಿಟಿಷರ ಆಶ್ರಿತ ಸಂಸ್ಥಾನಾಧೀಶರಾಗಿದ್ದರು. 3ನೆಯ ತುಕೋಜಿರಾವ್ ತನ್ನ ಸಂಸ್ಥಾನದ ಹೊರಗೆ ನಡೆದ ಕೊಲೆಯೊಂದಕ್ಕೆ ಕಾರಣನಾಗಿದ್ದನೆಂಬ ಕಾರಣದಿಂದ ಸಿಂಹಾಸನ ತ್ಯಾಗ ಮಾಡಬೇಕಾಯಿತು.							(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ